ಪ್ಯಾರಮೀಸಿಯಮ್ - 
	ಪ್ರೋಟೊಜೋವ ವಿಭಾಗದ ಹಾಲೊಟ್ರೈಕ ಗುಣ ಟ್ರ್ಯೆಕೋಸ್ಪೊಮೇಟ ಉಪಗಣಕ್ಕೆ ಸೇರಿದ ಏಕಕೋಶ ಜೀವಿ. ಇದರಲ್ಲಿ ಸುಮಾರು 10 ಪ್ರಭೇದಗಳುಂಟು. ಸಿಹಿನೀರಿನ ಕೊಳಚೆ ಗುಂಡಿಗಳಲ್ಲಿ ಇವುಗಳ ವಾಸ. ತುಂಬ ಚಿಕ್ಕಗಾತ್ರದ ಪ್ರಾಣಿಗಳಿವು. ಪ್ಯಾರಮೀಸಿಯಮ್ ಕಾಡೇಟಮ್ ಸುಮಾರು 0.25 ಮಿ.ಮೀ ಉದ್ದ ಇದೆ. ಎಲ್ಲ ಪ್ರಭೇದಗಳ ಆಕಾರವೂ ಒಂದೇ ತೆರ; ಚಪ್ಪಲಿಯಂತೆ. ಇದರಿಂದಾಗಿ ಪ್ಯಾರಮೀಸಿಯಮಿಗೆ ಚಪ್ಪಲಿಯಾಕಾರದ ಸೂಕ್ಷ್ಮ ಜೀವಿ (ಸ್ಲಿಪರ್ ಅನಿಮಾಲಿಕ್ಯೂಲ್) ಎಂಬ ಹೆಸರು ಬಂದಿದೆ. ಇವು ವಾಸಿಸುವ ನೀರಿನ ಒಂದು ಹನಿಯನ್ನು ಸೂಕ್ಷ್ಮದರ್ಶಿಯ ಸಹಾಯದಿಂದ ಪರೀಕ್ಷಿಸಿದಾಗ ಇವು ನುಲುಚಿಕೊಂಡು ಹೆಚ್ಚು ಚಟುವಟಿಕೆಯಿಂದ ಈಜುವುದನ್ನು ಕಾಣಬಹುದು. ಅಮೀಬದಷ್ಟು ಸೂಕ್ಷ್ಮಗಾತ್ರದ ಪ್ರಾಣಿಯಲ್ಲದಿದ್ದರೂ ಇದರ ಸೂಕ್ಷ್ಮಾಂಗಗಳನ್ನು ಸೂಕ್ಷ್ಮದರ್ಶಕದ ಬಳಕೆಯಿಂದ ಮಾತ್ರ ನೋಡಬಹುದು. ಪ್ಯಾರಮೀಸಿಯಮ್ ಬರಿಗಣ್ಣಿಗೆ ಬಿಳಿಯ ಚುಕ್ಕೆಯಂತೆ ಕಾಣುತ್ತದೆ.

	ಪ್ಯಾರಮೀಸಿಯಮ್ ದೇಹ ಮೇಲೆ ಹೇಳಿದಂತೆ ಚಪ್ಪಲಿಯಾಕಾರದ್ದು ದೇಹದ ಒಂದು ತುದಿ ಇನ್ನೊಂದಕ್ಕಿಂತ ಕೊಂಚ ಮೊಂಡಾಗಿದೆ. ಮೊಂಡು ತುದಿಗೆ ಅಗ್ರಭಾಗ ಇಲ್ಲವೆ ಮುಂತುದಿ (ಆಂಟೀರಿಯಲ್ ಎಂಡ್) ಎಂದೂ ಚೂಪುತುದಿಗೆ ಪಶ್ಚ ಭಾಗ ಇಲ್ಲವೆ ಹಿಂತುದಿ (ಪೋಸ್ಟೀರಿಯರ್ ಎಂಡ್) ಎಂದೂ ಹೆಸರು. ಅಂತೆಯೇ ದೇಹದ ಒಂದು ಪಾಶ್ರ್ವ ಇನ್ನೊಂದಕ್ಕಿಂತ ಹೆಚ್ಚು ಚಪ್ಪಟೆಯಾಗಿದೆ. ಇದೇ ದೇಹದ ಅಂಕೀಯ (ವೆಂಟ್ರಲ್) ಭಾಗ. ದೇಹದ ಸುತ್ತ ಪೆಲಿಕಲ್ ಎಂಬ ಪೊರೆ ಉಂಟು. ಇದರ ಮೇಲೆ ಲಂಬಾಕ್ಷೀಯ - ಸಾಲುಗಳಲ್ಲಿ ಜೋಡಣೆಗೊಂಡಿರುವ ಸಾವಿರಾರು ಷಟ್ಭುಜಾಕಾರದ ಕುಳಿಗಳಿವೆ. ಒಂದೊಂದು ಕುಳಿಯಿಂದಲೂ ಒಂದೊಂದು ಸೂಕ್ಷ್ಮ ಶಿಲಕೆ (ಸಿಲಿಯಮ್) ಹೊರಡುತ್ತದೆಯಾಗಿ ಇಡೀ ದೇಹ ಸಾವಿರಾರು ಶಿಲಕೆಗಳಿಂದ ಆವೃತವಾಗಿದೆ.

ಪ್ಯಾರಮೀಸಿಯಮಿನ ಅಂಕೀಯ ಭಾಗದಲ್ಲಿ ಅಗ್ರ ಭಾಗದಿಂದ ಪಶ್ಷಭಾಗಕ್ಕೆ ಅಡ್ಡಲಾಗಿ ಚಾಚಿರುವ ಒಂದು ತೋಡು ಉಂಟು. ಇದಕ್ಕೆ ಅಂಕೀಯ ತೋಡು ಎಂದು ಹೆಸರು. ಪೆಲಿಕಲ್ ಪೊರೆಯ ತಳಭಾಗದಲ್ಲಿ ಪ್ಲಾಸ್ಮ ಪೊರೆ ಇದೆ. ಪೆಲಿಕಲ್ಲಿನಿಂದ ಆವೃತವಾಗಿರು ಕೋಶದ್ರವ್ಯದ ಹೊರಗಿನ ಭಾಗಕ್ಕೆ ಕಾರ್ಟೆಕ್ಸ್ ಎಂದೂ ಒಳಗಿನ ಭಾಗಕ್ಕೆ ಮೆಡುಲ ಎಂದೂ ಹೆಸರು. ದೇಹದ ಒಂದು ಕಡೆ ಸೂಕ್ಷ್ಮ ರಂಧ್ರವಿದೆ. ಇದೇ ಗುದದ್ವಾರ. ಟ್ರೈಕೋಸಿಸ್ಟ್ (ರೋಮಕೋಶ) ಗಳು ಪೆಲಿಕಲ್‍ನಲ್ಲಿ ಹುದುಗಿರುತ್ತವೆ. ಜಿಲೆಟಿನ್ ಎಂಬ ವಸ್ತುವಿನಿಂದ ರೂಪುಗೊಂಡಿವೆ. ಪ್ರಾಣಿಯನ್ನು ಕೆರಳಿಸಿದರೆ ಟ್ರೈಕೊಸಿಸ್ಟ್‍ಗಳಿಂದ ಜಿಲೆಟಿನ್ ಹೊರಬಂದು ನೀರಿನಲ್ಲಿ ಗಟ್ಟಿಯಾಗಿ ಬಂಧಕ ಜಾಲವನ್ನು ರಚಿಸಿ ರಕ್ಷಣಾಸಾಧನಗಳಾಗಿ ವರ್ತಿಸುವುವು. 

ಪ್ಯಾರಮೀಸಿಯಮಿನ ದೇಹದಲ್ಲಿ 10-20 ಸೆಕೆಂಡು ಅಂತರದಲ್ಲಿ ಪರ್ಯಾಯವಾಗಿ ಸಂಕುಚನಗೊಳ್ಳುವ 2 ಸಂಕುಂಚನ ವ್ಯಾಕ್ಯೂಲಗಳುಂಟು, ದೇಹದ ಮುಂದಿನ ಅರ್ಧಭಾಗದ ಮಧ್ಯದಲ್ಲಿ ಒಂದು, ಹಿಂದಿನ ಅರ್ಧಭಾಗದಲ್ಲಿ ಮತ್ತೊಂದು ಹೀಗೆ ವ್ಯಾಕ್ಯೂಲಿನ ಸುತ್ತ ಕಿರಣಗಳೋಪಾದಿಯಲ್ಲಿರುವ 6-11 ವಿಕಿರಣ ನಾಲೆಗಳಿವೆ. ದೇಹದಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾದ ನೀರನ್ನು ವಿಕಿರಣ ನಾಲೆ ಸಂಗ್ರಹಿಸಿ, ಸಂಕುಂಚನ ವ್ಯಾಕ್ಯೂಲಿಗೆ ತುಂಬುತ್ತದೆ. ಹೀಗೆ ಸಂಗ್ರಹವಾದ ನೀರು ಸಂಕುಂಚನ ವ್ಯಾಕ್ಯೂಲುಗಳನ್ನು ದೊಡ್ಡದಾಗಿ ಮಾಡುವುದು. ಸಂಕುಂಚನ ವ್ಯಾಕ್ಯೂಲುಗಳು ಒಂದು ಮಿತಿಯನ್ನು ಮುಟ್ಟುವಷ್ಟು ದೊಡ್ಡದಾದ ಮೇಲೆ, ಅವು ಸಂಕುಚಿಸಿ ನೀರನ್ನು ಹೊರಗೆಡಹುತ್ತವೆ. ಪ್ಯಾರಮೀಸಿಯಮಿನ ಆಹಾರ ಬ್ಯಾಕ್ಟೀರಿಯ, ಡೈಯಾಟಮ್, ಈಸ್ಟ್, ಇತರ ಸಣ್ಣಸಣ್ಣ ಪ್ರೋಟೋಜೋವ ಪ್ರಾಣಿ, ಮೊದಲಾದ ಸಾವಯವ ವಸ್ತುಗಳು.

ಮೆಡುಲದಲ್ಲಿಯ ಜೀವರಸ ಯಾವಾಗಲೂ ಪ್ರದಕ್ಷಿಣ ರೀತಿಯಲ್ಲಿ ಚಲಿಸುತ್ತ ಇರುತ್ತದೆ. ಜೀವರಸದಲ್ಲಿ ಎರಡು ಬಗೆಯ ನ್ಯೂಕ್ಲಿಯಸ್ಸುಗುಳುಂಟು. ಒಂದು ಗಾತ್ರದಲ್ಲಿ ದೊಡ್ಡದು. ಇದಕ್ಕೆ ಸ್ಥೂಲ ನ್ಯೂಕ್ಲಿಯಸ್ ಎಂದು ಹೆಸರು. ಮತ್ತೊಂದು ಇದರ ಪಕ್ಕದಲ್ಲಿದೆ. ಇದು ಗಾತ್ರದಲ್ಲಿ ಚಿಕ್ಕದು. ಇದರ ಹೆಸರು ಸೂಕ್ಷ್ಮ ನ್ಯೂಕ್ಲಿಯಸ್, ಸೂಕ್ಷ್ಮ ನ್ಯೂಕ್ಲಿಯಸ್ ಸಂತಾನೋತ್ಪತ್ತಿಯ ಕ್ರಿಯೆಗೆ ಸಹಕಾರಿಯಾದರೆ, ಸ್ಥೂಲ ನ್ಯೂಕ್ಲಿಯಸ್ ಪ್ಯಾರಮೀಸಿಯಮಿನ ಚಯಾಪಚಯ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.

ಪ್ಯಾರಮೀಸಿಯಮ್ ಅಲೈಂಗಿಕ ರೀತಿಯಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಅಲ್ಲದೆ ಲೈಂಗಿಕ ರೀತಿಯ ಅನುಬದ್ಧ (ಕಾಂಜುಗೇಷನ್) ಸಂಯೋಗ, ಸ್ವಯುಗ್ಮನ (ಆಟೊಗೆಮಿ), ಅಂತಃಮಿಶ್ರಣ (ಎಂಡೊಮಿಕ್ಸಿಸ್) ಮೊದಲಾದ ಬಗೆಗಳಲ್ಲಿ ತನ್ನ ನ್ಯೂಕ್ಲಿಯಸ್‍ಗಳನ್ನು ಪುನರ್ರಚಿಸಿಕೊಳ್ಳುತ್ತ ಸಂತಾನೋತ್ಪತ್ತಿ ನಡೆಸುತ್ತದೆ.

ಪ್ಯಾರಮೀಸಿಯಮಿನ ಸಂತಾನೋತ್ಪತ್ತಿಯಲ್ಲಿ ಅನುಬದ್ಧ ಸಂಯೋಗ ಬಹುಮುಖ್ಯವಾದ್ದು. ಜೀವನಚಕ್ರದ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಎರಡು ಪ್ಯಾರಮೀಸಿಯಮುಗಳು ಜೋಡಿಯಾಗಿ ಸೇರುತ್ತವೆ. ಈ ಸಮಯದಲ್ಲಿ ಪ್ರಾಣಿಗಳು ತಮ್ಮ ತಮ್ಮ ಸೂಕ್ಷ್ಮ ನ್ಯೂಕ್ಲಿಯಸುಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಬೇರೆಯಾಗುತ್ತವೆ. ಅನಂತರ ಇವುಗಳಿಗೆ ನವಚೈತನ್ಯ ಬರುತ್ತದೆ. ಈ ಬಗೆಯ ಸಂಯೋಗಕ್ಕೆ ಅನುಬದ್ಧ ಸಂಯೋಗ ಎಂದು ಹೆಸರು. ಇದರಲ್ಲಿ ಸಂಬಂಧ ಬೆಳೆಸುವ ಪ್ರಾಣಿಗಳಿಗೆ ಅನುಬದ್ಧ ಸಂಯೋಗಿಗಳೆಂದು ಕರೆಯಲಾಗುತ್ತದೆ. ಇಂಥ ಸಂಯೋಗ ಕ್ರಿಯೆ ಪ್ಯಾರಮೀಸಿಯಮಿನ ವೈಶಿಷ್ಟ್ಯ.
(ಎಂ.ಎನ್.ವಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ